ಬಾನ್ -
ಪಶ್ಚಿಮ ಜರ್ಮನಿ ಸಂಯುಕ್ತ ಗಣರಾಜ್ಯದ ರಾಜಧಾನಿ. ಆಡಳಿತ ಕೇಂದ್ರ ನಗರ. ಕಾಲೋನ್‍ನಿನ ದಕ್ಷಿಣಕ್ಕೆ 32 ಕಿಮೀ ದೂರದಲ್ಲಿದೆ. ಉತ್ತರ ಅಕ್ಷಾಂಶ 50044ಯಿಂದ ಪೂರ್ವರೇಖಾಂಶ 705ಯಲ್ಲಿದೆ. ನಗರ ರೈನ್ ನದಿಯ ಎರಡೂ ದಂಡೆಯ ಮೇಲೆ ಬೆಳೆದಿದೆ. ಜನಸಂಖ್ಯೆ 2,99,376. ಜೀಕ್‍ಬರ್ಗ್ ಸೇರಿದ ಬಾನ್ ಮಹಾನಗರದ ಜನಸಂಖ್ಯೆ. 5,08,719(1970).

ಬಾನ್ ಒಂದು ಕೈಗಾರಿಕಾ ನಗರವೆನ್ನುವುದಕ್ಕಿಂತ ಪ್ರಸಿದ್ಧ ರಾಜಕೀಯ ಮತ್ತು ವ್ಯಾಪಾರ ವಾಣಿಜ್ಯ ಕೇಂದ್ರವೆನ್ನಬಹುದು. ಆದರೂ ಇಲ್ಲಿ ರಾಸಾಯನಿಕ ವಸ್ತುಗಳು, ವಿದ್ಯುತ್ ಉಪಕರಣಗಳು, ಮರದ ಸಾಮಾನುಗಳು, ಕಾಗದ, ಔಷಧಗಳು ಮತ್ತು ವಿವಿಧ ಸೂಕ್ಷ್ಮ ಲೋಹ ಉಪಕರಣಗಳು ಇಲ್ಲಿ ತಯಾರಾಗುತ್ತವೆ.

ಬಾನ್ ಒಂದು ಪ್ರಾಚೀನ ಕಾಲದ ವಸತಿ ಎಂದು ಗುರುತಿಸಲಾಗಿದೆ. ಅಲ್ಲಿಯ ಬೊನೇಸಿಯಾ ಎಂಬ ಕೋಟೆ 5 ನೆಯ ಶತಮಾನದ ತನಕ ರೋಮನ್ನರ ವಶದಲ್ಲಿತ್ತು. ರೋಮನ್ ಚಕ್ರಾಧಿಪತ್ಯದ ಪತನಾನಂತರ ಖಾಸಗಿ ವಸತಿ ನೆಲೆಯಾಗಿ ಉಳಿಯಿತು. ಅನಂತರ 13 ರಿಂದ 19ನೆಯ ಶತಮಾನದ ತನಕ ಅಷ್ಟು ಹೆಚ್ಚು ವಿಸ್ತರಿಸಲ್ಪಡದಿದ್ದರೂ ಕಾಲೋನ್‍ನಿನ ಆರ್ಚ್‍ಬಿಷಪ್ ಚರ್ಚಿನ ಆಡಳಿತ ಕೇಂದ್ರವಾಗಿ ಪ್ರಾಮುಖ್ಯಗಳಿಸಿತು. ಫ್ರೆಂಚ್ ಆಕ್ರಮಣಾನಂತರ 1794ರಲ್ಲಿ ಬಿಷಪ್‍ರ ಆಡಳಿತ ಅಂತ್ಯಗೊಂಡಿತು. ನೆಪೋಲಿಯನ್ನನ ಆಕ್ರಮಣಕ್ಕೆ ಆಗಾಗ ಒಳಗಾದ ಈ ಪಟ್ಟಣ ಬಡವಾಯಿತು. 1815ರಲ್ಲಿ ಇದನ್ನು ಪ್ರಷ್ಯಾಕ್ಕೆ ಸೇರಿಸಲಾಯಿತು. 1818ರಲ್ಲಿ ಪ್ರಸಿದ್ಧ ಬಾನ್ ವಿಶ್ವವಿದ್ಯಾಲಯ ಸ್ಥಾಪಿತವಾಗಿ ನಗರದ ಇತಿಹಾಸದಲ್ಲಿ ಒಂದು ತಿರುವಾಗಿ ಪರಿಣಮಿಸಿತು. ಆದರೂ 19ನೆಯ ಶತಮಾನದ ಆದಿಭಾಗದ ತನಕವೂ ಈ ಪಟ್ಟಣ ಅಷ್ಟೇನೂ ಅಭಿವೃದ್ಧಿ ಸಾಧಿಸಲಿಲ್ಲ. ಅನಂತರ 1914ರಲ್ಲಿ ನಗರಕ್ಕೆ ಸುತ್ತಮುತ್ತಲಿನ ಹಳ್ಳಿಗಳನ್ನು ಸೇರಿಸಿ ದೊಡ್ಡ ಬಡಾವಣೆಗಳನ್ನು ಕಟ್ಟಲಾಯಿತು. ಅದರಿಂದಾಗಿ ಪಟ್ಟಣ ಶೀಘ್ರವಾಗಿ ಬೆಳೆಯಿತು. ಪ್ರಥಮ ಮಹಾಯುದ್ಧಾನಂತರ ಧನಿಕರೆಲ್ಲ ಇಲ್ಲಿಂದ ಬೇರೆಡೆಗೆ ಓಡಿಹೋದಾಗ ಈ ನಗರ ಮತ್ತೆ ಬಡವಾಗಿ ಎರಡನೆಯ ಮಹಾಯುದ್ಧದ ವಿಧ್ವಂಸಕ ಕೃತ್ಯಕ್ಕೆ ಈಡಾಗಿ ಅನೇಕ ಕಟ್ಟಡಗಳು ಧ್ವಂಸವಾಗಿ ಹೋದುವು. 1949 ರಲ್ಲಿ ಇದು ಪಶ್ಚಿಮ ಜರ್ಮನಿಯ ಪ್ರಾಂತ್ಯ ರಾಜಧಾನಿಯಾದ ಬಳಿಕ ಇದರ ಬೆಳವಣಿಗೆ ಆಯಿತು. 1969ರ ಬಾನ್ ಕಾಯಿದೆ ಪ್ರಕಾರ ಜೀಕ್‍ಬರ್ಗ್ 30 ಗ್ರಾಮಗಳನ್ನು ಒಳಗೊಂಡ ಬೃಹತ್ ನಗರ ನಿರ್ಮಾಣವಾಯಿತು. ಹಾಗೆಯೇ ಹಳೇ ನಗರದ ಸುತ್ತಮುತ್ತ ಅನೇಕ ಆಧುನಿಕ ಬಡಾವಣೆಗಳು ಬೆಳೆದುವು. ನಗರದ ಬಳಿಯ ರೈನ್ ನದಿಗೆ ಸಮೀಪದಲ್ಲಿ ತಗ್ಗಾದ ಬಯಲು ದಕ್ಷಿಣದಲ್ಲಿ ಹಬ್ಬಿದೆ. ನದಿಯ ಉತ್ತರಭಾಗಕ್ಕೆ ಬೆಟ್ಟದ ದಿಣ್ಣೆ ಕಂಡುಬರುತ್ತದೆ. ಈ ಎರಡು ಪ್ರದೇಶಗಳನ್ನೂ ಹಾದುಬರುವ ರೈನ್ ನದಿಯ ಇಕ್ಕೆಲಗಳಲ್ಲೂ ನಗರ ಹಬ್ಬಿದ್ದು, ಉತ್ತರ ದಕ್ಷಿಣವಾಗಿ ಹಾದು ಹೋಗುವ ಅನೇಕ ರಸ್ತೆ ಮತ್ತು ರೈಲು ಮಾರ್ಗಗಳು ಒಂದಕ್ಕೊಂದು ಹೆಣೆದುಕೊಂಡು ರೈಲು, ರಸ್ತೆಗಳ ಕೇಂದ್ರ ನಿಲ್ದಾಣವಾಗಿದೆ. 19ನೆಯ ಶತಮಾನದಲ್ಲಿ ಇಲ್ಲಿಗೆ ವಲಸೆ ಹೋದ ಜನ ಕೈಗಾರಿಕೆಗಳನ್ನು ಈ ಪಟ್ಟಣದ ಹೊರವಲಯದಲ್ಲಿ ಸ್ಥಾಪಿಸಿ ಒಳಭಾಗವನ್ನು ವಾಸಿಸಲು ಯೋಗ್ಯವಾದ ನಗರವಾಗಿ ಮಾಡಿದರು. ಇದರಿಂದಾಗಿ ಬಾನ್ ಕೈಗಾರಿಕೆಯಲ್ಲಿ ಹಿಂದುಳಿಯಿತು. ಆದರೆ ಇದು ಪಶ್ಚಿಮ ಜರ್ಮನ್ ರಾಷ್ಟ್ರದ ರಾಜಧಾನಿಯಾದುದರಿಂದ ಅನೇಕ ಸೇವಾ ಸಂಸ್ಥೆಗಳ ಕೈಗಾರಿಕೆಗಳು ಬೆಳೆದು ಸುಮಾರು ಅರ್ಧದಷ್ಟು ಮಂದಿ ಇವುಗಳಲ್ಲೇ ವೃತ್ತಿನಿರತರಾಗಿದ್ದಾರೆ.

ಬಾನ್‍ನಗರದಲ್ಲಿ ಸರ್ಕಾರಿ ಮುಖ್ಯ ಕಛೇರಿಗಳು ಇರುವುವಲ್ಲದೆ ಸುಮಾರು ನೂರಕ್ಕೂ ಹೆಚ್ಚು ರಾಷ್ಟ್ರಗಳ ರಾಯಭಾರಿಗಳು ಆರುನೂರಕ್ಕೂ ಹೆಚ್ಚು ಆಡಳಿತಗಾರರು ನೆಲಸಿದ್ದಾರೆ. ಅನೇಕ ಪ್ರಾಂತೀಯ ಸಂಸ್ಥೆಗಳು, ಪ್ರಾಚೀನ ವಾಸ್ತುಶಿಲ್ಪ ಆಡಳಿತ ಕಛೇರಿ, ರಸ್ತೆ ಸರ್ವೇಕ್ಷಣ ಕಛೇರಿ, ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರ ಕಛೇರಿಗಳು ಮತ್ತು ನ್ಯಾಯಾಲಯಗಳು ಇವೆ. ರೈಲು, ವಿಮಾನ, ಆಸ್ಪತ್ರೆ ಮುಂತಾದ ಆಧುನಿಕ ನಗರದ ಇತರೆ ಸೌಕರ್ಯಗಳೂ ಈ ನಗರದಲ್ಲಿವೆ.

ಬಾನ್ ನಗರ ಬೇತೋವೆನ್ನನ ಜನ್ಮ ಸ್ಥಳ. ಸಂಗೀತ ಕಲೆಗೆ ಪ್ರಸಿದ್ಧ. ನಗರಸಭೆ ಸಮೂಹ ಸಂಗೀತ ಹಾಗೂ ಪ್ರಖ್ಯಾತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗೀತ ಮೇಳಗಳನ್ನು ಏರ್ಪಡಿಸುತ್ತದೆ. ಸಂಗೀತ ಕಛೇರಿಗಳನ್ನು ನಡೆಸುವ ಅನೇಕ ಸಂಘಸಂಸ್ಥೆಗಳು ಇಲ್ಲಿವೆ. ಬೇತೋವೆನ್ನನ ಆಧುನಿಕ ಸ್ಮಾರಕ ಭವನ ಬಾನ್ ನಗರ ಸಂಗೀತ ಸಮ್ಮೇಳನಗಳ ಜೀವನಾಡಿಯಾಗಿದೆ. ವಸ್ತು ಸಂಗ್ರಹಾಲಯ, ಚಿತ್ರಶಾಲೆ ಮತ್ತು ಬಾನ್ ವಿಶ್ವವಿದ್ಯಾಲಯ 11-13ನೆಯ ಶತಮಾನದೆ ರೊಮೆನೆಸ್ಕ್ ಬಿಸಿಲಿಕ ಚರ್ಚ್ ಪ್ರೊಪೆಲ್ಸ್ ಡಾರ್ಫ್ ಅರಮನೆ, ಸುಂದರ ಉದ್ಯಾನಗಳೂ ವಿಹಾರ ಕೇಂದ್ರಗಳೂ ಇವೆ. (ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ